ನಾನು ಮತ್ತು ಜೇನು - ಭಾಗ ೨

ಅಷ್ಟರಲ್ಲಿ ಎಲ್ಲಿಯೋ ಓದಿದ್ದ “ಜೇನುನೊಣಗಳು ತಮಗೆ ಅಪಾಯವಿದೆ ಎನ್ನುವಾಗ ದಾಳಿ ನಡೆಸುತ್ತವೆ. ಅಕಸ್ಮಾತ್ ಒಂದೆರಡು ಕಚ್ಚಿದರೂ ನಾವು ಅವುಗಳಿಗೆ ಅಪಾಯ ಮಾಡದಿದ್ದಲ್ಲಿ ಅವು ಏನು ತೊಂದರೆ ಮಾಡುವುದಿಲ್ಲ ಎನ್ನುವ ವಿಚಾರ ಅಸ್ಪಷ್ಟವಾಗಿ ನೆನಪಾಯಿತು. ಎತ್ತಿದ ಕೈಯನ್ನು ಹಾಗೆಯೇ ಇಳಿಸಿ ನಿಧಾನವಾಗಿ ನಡೆದುಕೊಂಡು ಹೊರಟೆ. ತಲೆಗೆ ಮುತ್ತಿಕೊಂಡ ಜೇನುನೊಣಗಳು ಯಾವ ಅಪಾಯವನ್ನೂ ಮಾಡದೇ ಒಂದೊಂದಾಗಿ ಹಾರಿ ಹೋದವು. ನನ್ನ ಕೊಠಡಿಯ ಬಳಿ ಬರುವಷ್ಟರಲ್ಲಿ ತಲೆಗೆ ಮುತ್ತಿದ್ದ ಜೇನು ನೊಣಗಳೆಲ್ಲಾ ಮಾಯವಾಗಿದ್ದವು. ಕಾಲ ಕಳೆದಂತೆ ಈ ವಿಚಾರ ಮನದಿಂದ ಮರೆಯಾಯಿತು.

ನಾನು ನನ್ನ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದೆ. ಒಂದು ದಿನ ನಾನು ಕಛೇರಿಯಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಪರಿಚಿತರೊಬ್ಬರಿಂದ ದೂರವಾಣಿ ಕರೆ ಬಂತು. ನಾನು ಕರೆ ಸ್ವೀಕರಿಸಿ ಯೋಗಕ್ಷೇಮ ವಿಚಾರಿಸುವ ಮೊದಲೇ ಅವರು ಒಂದೇ ಉಸುರಿಗೆ “ಮೂರ್ತಿ ವಿಷಯ ಗೊತ್ತಾಯ್ತ, ತೇಜಸ್ವಿಯವರು ತೀರಿ ಹೋದರು.” ಅಂದರು. ವಿಷಯ ತಿಳಿದ ಕೂಡಲೇ ಜಗತ್ತೇ ಸ್ತಬ್ಧವಾದಂತೆನಿಸಿತು. ಏನು ಹೇಳಬೇಕು ತೋಚಲೇ ಇಲ್ಲ. ನಂತರ ಸಾವರಿಸಿಕೊಂಡು. ನಾನು ನಂತರ ಕರೆ ಮಾಡುತ್ತೇನೆ ಎಂದು ಹೇಳಿ, ನಮ್ಮ ಕಛೇರಿಯಲ್ಲಿ ಟಿವಿ ಇಟ್ಟಿದ್ದ ಕೊಠಡಿಗೆ ಓಡಿದೆ. ಈಟಿವಿಯಲ್ಲಿ ತೇಜಸ್ವಿ ನಿಧನರಾಗಿರುವ ಸುದ್ದಿ ಬಿತ್ತರಿಸುತ್ತಿದ್ದರು. ಏನೋ ಒಂದು ಬಗೆಯ ಖಾಲಿತನ, ಖಿನ್ನತೆ ಮನಸ್ಸನ್ನು ಆವರಿಸಿಕೊಂಡಿತು. ಸಂಜೆಯ ವೇಳೆಗೆ ಈ ಮನಸ್ಥಿತಿಯಿಂದ ಆಚೆ ಬರುವುದೇ ಅಸಾಧ್ಯವೆನಿಸಿತು. ಈ ಮನಸ್ಥಿತಿಯಿಂದ ಹೊರಬರಬೇಕಾದರೆ ಒಂದೇ ದಾರಿ ಎಂದು ನಿರ್ಧರಿಸಿ. ಕೆಲಸಕ್ಕೆ ಒಂದು ವಾರ ರಜಾ ಹಾಕಿ, ಸಪ್ನಾ ಬುಕ್ ಹೌಸಿಗೆ ಹೊರಟೆ.

ನಾನು ಅಲ್ಲಿಯವರೆಗೆ ತೇಜಸ್ವಿಯವರ ಕೃತಿಗಳನ್ನು ಕಾಲೇಜಿನ ಗ್ರಂಥಾಲಯಗಳಲ್ಲಿ, ಸ್ನೇಹಿತರ ಬಳಿ ಇಸಿದುಕೊಂಡು ಓದಿದ್ದೆನಾದರೂ, ನನ್ನ ಬಳಿ ಅವರ ಕೆಲವೇ ಕೆಲವು ಪುಸ್ತಕಳಿದ್ದವು. ಅಂದು ನೇರವಾಗಿ ಸಪ್ನಾ ಬುಕ್ ಹೌಸಿಗೆ ಹೋಗಿ ಅಲ್ಲಿ ಲಭ್ಯವಿದ್ದ (ನನ್ನ ಅದೃಷ್ಟಕ್ಕೆ ಅಂದು ಕೆಲವು ಮಿಲೇನಿಯಂ ಸೀರಿಸ್ ಪುಸ್ತಕಗಳನ್ನು ಹೊರತುಪಡಿಸಿ ಬಹುಪಾಲು ಪುಸ್ತಕಗಳು ಲಭ್ಯವಿದ್ದವು) ಎಲ್ಲಾ ಪುಸ್ತಕಗಳನ್ನು ತೆಗೆದುಕೊಂಡು ಮೈಸೂರಿನಲ್ಲಿದ್ದ ನಮ್ಮ ಮನೆಗೆ ಹೊರಟೆ. ಅಂದು ಮನೆ ತಲುಪಿದಾಗ ಮಧ್ಯರಾತ್ರಿಯಾಗಿತ್ತು. ಮನೆ ತಲುಪಿದವನೇ ಯಾರೂ ಏನೂ ಕೇಳಬೇಡಿ ಎಂದು ಹೇಳಿ ನನ್ನ ರೂಮನ್ನು ಸೇರಿಕೊಂಡೆ. ಮರುದಿನ ಬೇಗ ಎದ್ದವನೇ ಬೇಗ ಸ್ನಾನ ಮುಗಿಸಿ ಸಿದ್ಧವಾಗಿ ತೇಜಸ್ವಿಯವರ ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಓದಲು ಶುರು ಮಾಡಿದೆ. ಅವರ ನಿಗೂಢ ಮನುಷ್ಯರು ಮುಗಿಸಿ ಕಿರಗೂರಿನ ಗಯ್ಯಾಳಿಗಳಿಗೆ ಬರುವಷ್ಟರಲ್ಲಿ ಮನಸ್ಸು ಸ್ವಲ್ಪ ತಿಳಿಯಾಯಿತು. ಮೂರನೇ ದಿನದ ವೇಳೆಗೆ ಅವರ ಮಿಲೇನಿಯಮ್ ಸಿರೀಸ್ ಮುಗಿಸಿ ಕರ್ವಾಲೋಗೆ ಬಂದಿದ್ದೆ. ಕರ್ವಾಲೋ ಓದಬೇಕಾದರೆ ನನಗೆ ನನ್ನ ಜೇನ್ನೊಣದ ಪ್ರಸಂಗ ನೆನಪಾಯಿತು. ಅದರಲ್ಲಿ ವಿಜ್ಞಾನಿ ಕರ್ವಾಲೋ ಜೇನ್ನೊಣಗಳ ಬಗ್ಗೆ ಮಾಹಿತಿ ನೀಡುತ್ತಾ ಹೇಳುವ ಮಾತುಗಳು ನನಗೆ ಜೇನ್ನೊಣ ಮುತ್ತಿಕೊಂಡಾಗ ನೆನಪಿಗೆ ಬಂದು ನನ್ನ ಜೀವ ಉಳಿಸಿದ್ದವು. ಕರ್ವಾಲೋ ಮುಗಿಸುವಷ್ಟರಲ್ಲಿ ಮನಸ್ಸು ಸಂಪೂರ್ಣವಾಗಿ ತಿಳಿಯಾಯಿತು. ಸಂಜೆಯ ವೇಳೆಗೆ ನಾನು ಮಾಮೂಲಿ ಮನುಷ್ಯನಾಗಿದ್ದೆ. ನನ್ನ ಅಮ್ಮ ಚೆನ್ನಾಗಿ upset ಆಗ್ತೀಯಾ ಬಿಡಪ್ಪಾ ಎಂದು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಕಿದ ಒಂದು ವಾರದ ರಜೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ತೇಜಸ್ವಿಯವರ ಪುಸ್ತಕಗಳನ್ನು ಓದಿ, ಓದಿ ಮುಗಿಸಿದ ಪುಸ್ತಕಗಳನ್ನು ಮನೆಯಲ್ಲೇ ಬಿಟ್ಟು ಉಳಿದವನ್ನು ತೆಗೆದುಕೊಂಡು ಬೆಂಗಳೂರಿಗೆ ಮರಳಿದೆ. ಮುಂದಿನ ಬಾರಿ ಮೈಸೂರಿಗೆ ಹೋದಾಗ ಮನೆಯಲ್ಲೇ ಬಿಟ್ಟು ಹೋಗಿದ್ದ ತೇಜಸ್ವಿಯವರ ಪುಸ್ತಕಗಳನ್ನು ಓದಿದ್ದ ನನ್ನ ಅಮ್ಮ ಹೇಳುತ್ತಿದ್ದರು “ನೀನು ಯಾಕೆ upset ಆಗಿದ್ದೆ ಅಂತ ಈವಾಗ ಗೊತ್ತಾಯ್ತು.”

 (ಮುಗಿಯಿತು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ