ಹಾಗೆ ನೋಡಿದರೆ ನಾನು ಚಿಕ್ಕಂದಿನಲ್ಲಿ ಅಂಬರೀಷ್ ಚಿತ್ರಗಳ ದೊಡ್ಡ ಅಭಿಮಾನಿ. ನನ್ನ ಬಾಲ್ಯದ ಬಹುತೇಕ ರಜಾ ದಿನಗಳನ್ನು ಮಂಡ್ಯದ ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದೆ. ಅಲ್ಲಿದ್ದ ನನ್ನ ಸ್ನೇಹಿತರು ಅಂಬರೀಷ್ ಚಿತ್ರಗಳ ಬಗ್ಗೆ ಕಾಳಿದಾಸನ ರೇಂಜಿನಲ್ಲಿ ವರ್ಣನೆ ಮಾಡಿ ಮಾಡಿ ನನಗೇ ಗೊತ್ತಿಲ್ಲದ ಹಾಗೇ ಅಂಬರೀಷ್ ಚಿತ್ರಗಳ ಅಭಿಮಾನಿಯಾಗಿದ್ದೆ. ಬಹುತೇಕ ಅಂಬರೀಷ್ ಚಿತ್ರಗಳು ಸಾಹಸ ಪ್ರಧಾನವಾಗಿದ್ದದ್ದೂ ಕೂಡ ಒಂದು ಕಾರಣವಾಗಿರಬಹುದು. ಆ ತರದ ಸಾಹಸ, ಆಂಗ್ರಿ ಯಂಗ್ ಮನ್ ಶೈಲಿಯಲ್ಲಿ ರಾಜ್ ಕುಮಾರ್ ಚಿತ್ರಗಳು ಇರುತ್ತಿರಲಿಲ್ಲ ಹಾಗೂ 90 ರ ದಶಕದ ವೇಳೆಗೆ ರಾಜ್ ಕುಮಾರ್ ಚಿತ್ರಗಳು ಸಾಕಷ್ಟು ವಿರಳವಾಗಿದ್ದುದ್ದರಿಂದ ನನ್ನ ಮಂಡ್ಯದ ಸ್ನೇಹಿತರು ರಾಜ್ ಕುಮಾರ್ ಚಿತ್ರಗಳ ಬಗ್ಗೆ ಮಾತಾಡುತ್ತಲೇ ಇರಲಿಲ್ಲ.
ಜೊತೆಗೆ ಚಲನಚಿತ್ರಗಳನ್ನು ನೋಡಲು ದೂರದರ್ಶನವೊಂದನ್ನು ಹೊರತುಪಡಿಸಿ ಇಂದಿನಂತೆ ಕನ್ನಡದಲ್ಲಿ ಯಾವ ವಾಹಿನಿಗಳೂ ಇರಲಿಲ್ಲ. ಮಂಡ್ಯದ ಅಜ್ಜಿಯ ಮನೆಗೆ ಹೋದಾಗ ಯಾರದಾದರೂ ತಿಥಿಯ (ಸಾವಿನ ನಂತರದ ಹನ್ನೊಂದನೇ ದಿನದ ಕಾರ್ಯ) ಅಥವಾ ಊರಿನ ಹಬ್ಬಗಳ ಸಂದರ್ಭಗಳಲ್ಲಿ ಚಲನಚಿತ್ರಗಳ ವಿಡಿಯೋ ಕ್ಯಾಸೆಟ್ ಗಳನ್ನು ತರಿಸಿ ಎಲ್ಲರೂ ನೋಡುವಂತೆ ಅನುಕೂಲ ಕಲ್ಪಿಸುತ್ತಿದ್ದರು. ಆ ವಿಡಿಯೋ ಕ್ಯಾಸೆಟ್ ಗಳಲ್ಲಿ ಬಹುತೇಕ ಅಂಬರೀಷ್ ಚಿತ್ರಗಳೇ ಇರುತ್ತಿದ್ದವು. ಈ ಎಲ್ಲಾ ಕಾರಣಗಳಿಂದ ನನಗೆ ರಾಜ್ ಕುಮಾರ್ ಚಿತ್ರಗಳ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಇದೆಲ್ಲಾ ಬದಲಾದುದು ನಾನು ಕೊಡಗಿನ ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜು ಸೇರಿದ ನಂತರ.
ನಾನು ಇಂಜಿನಿಯರಿಂಗ್ ನ ಪ್ರಥಮ ವರ್ಷದಲ್ಲಿದ್ದಾಗ ರಾಜ್ ಕುಮಾರ್ ರನ್ನ ವೀರಪ್ಪನ್ ಅಪಹರಿಸಿದ್ದ. ದಿನಪತ್ರಿಕೆ, ವಾರಪತ್ರಿಕೆ ಎಲ್ಲವೂ ರಾಜ್ ಮಯ. ರಾಜ್ ಕುಮಾರ್ ರ ಬಗೆಗಿನ ಹಲವಾರು ವಿಷಯಗಳು ಆ ಸಮಯದಲ್ಲಿ ಪತ್ರಿಕೆಗಳಲ್ಲಿ ಬರುತ್ತಿದ್ದ ಲೇಖನಗಳಿಂದ ತಿಳಿಯಲಾರಂಬಿಸಿತು. ಅವರ ಜೀವನದ ಹಲವಾರು ಸ್ವಾರಸ್ಯಕರ ಘಟನೆಗಳ, ಅವರ ಸರಳತನ ಹಾಗೂ ವಿನಯವಂತಿಕೆ ಮತ್ತು ಅವರ ಚಿತ್ರಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿ ರಾಜ್ ಕುಮಾರ್ ಚಿತ್ರಗಳ ಬಗ್ಗೆ ಕುತೂಹಲ ಮೂಡಿತು. ಮುಂದೆ ವೀರಪ್ಪನ್ ನಿಂದ ರಾಜ್ ಕುಮಾರ್ ಬಿಡುಗಡೆಗೊಂಡು ಪ್ರಕರಣ ಸುಖಾಂತವಾಯಿತು.
ಒಂದೆರಡು ವರ್ಷಗಳ ಬಳಿಕ ಇಂಜಿನಿಯರಿಂಗ್ ನಲ್ಲೇ ನನಗೆ ನನ್ನ ಕಿರಿಯ ಮಿತ್ರ ಅನಿಲ್ ಕುಮಾರನ ಪರಿಚಯವಾಯಿತು. ಅವನು ರಾಜ್ ಕುಮಾರ್ ರ ಕಟ್ಟಾ ಅಭಿಮಾನಿ. ಅವನ ಊರು ಪಿರಿಯಾಪಟ್ಟಣದಲ್ಲಿ ಅವನಿಗೆ CD ಅಂಗಡಿಯೊಂದರ ಪರಿಚಯವಿತ್ತು. ರಾಜ್ ಕುಮಾರ್ ಚಿತ್ರಗಳ ಬಗ್ಗೆ ಸಾಕಷ್ಟು ಕುತೂಹಲ ಬೆಳೆಸಿಕೊಂಡಿದ್ದ ನಾನು ಅನಿಲ್ ಕುಮಾರ್ ನ ಬಳಿ ಆ CD ಅಂಗಡಿಯಿಂದ ರಾಜ್ ಕುಮಾರ್ ಚಿತ್ರಗಳನ್ನು ತರಿಸಲು ಪ್ರಾರಂಭಿಸಿದೆ. ಕಾಮನಬಿಲ್ಲು, ಹಾವಿನ ಹೆಡೆ, ಶಂಕರ್ ಗುರು, ಹಾಲು ಜೇನು, ತ್ರಿಮೂರ್ತಿ, ಭಕ್ತ ಪ್ರಹ್ಲಾದ ಹೀಗೆ ಹಲವಾರು ರಾಜ್ ಕುಮಾರ್ ಚಿತ್ರಗಳನ್ನು ನೋಡಿದ ಮೇಲೆ ನಟನೆ ಎಂದರೆ ರಾಜ್ ಕುಮಾರ್ ರದ್ದು ಎಂದೆನಿಸಲಾರಂಭಿಸಿತು. ನಾನು ಅಂಬರೀಷ್ ಪಕ್ಷದಿಂದ ರಾಜ್ ಕುಮಾರ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದೆ. ರಾಜ್ ಕುಮಾರ್ ರ ಸಾಕಷ್ಟು ಚಿತ್ರಗಳನ್ನು ನೋಡಿ, ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದ ಹಲವಾರು ವಿಷಯಗಳನ್ನು ಓದಿ ತಿಳಿದುಕೊಂಡು ನಮ್ಮ ಕಾಲೇಜಿನಲ್ಲಿ ನಾನು ರಾಜ್ ಕುಮಾರ್ ರ ಅಧಿಕೃತ ವಕ್ತಾರನಾಗಿದ್ದೆ! ಇಂತಹ ಅಧಿಕೃತ ವಕ್ತಾರ ರಾಜ್ ಕುಮಾರ್ ರನ್ನು ಭೇಟಿಯಾಗದೇ ಇರಲು ಸಾಧ್ಯವೇ!? ಇಂತಹದೊಂದು ಸುವರ್ಣವಕಾಶ ನನಗೆ ಮುಂದೆ ಒದಗಿ ಬಂತು.
ನಾನು ಇಂಜಿನಿಯರಿಂಗ್ ವ್ಯಾಸಂಗದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಆ ವರ್ಷ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದವರು ತುಮಕೂರಿನಲ್ಲಿ ನಡೆಸುತ್ತಿದ್ದ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ನಮ್ಮ ಕಾಲೇಜಿನಿಂದ ಕಳುಹಿಸಿದ್ದ ತಂಡದಲ್ಲಿ ನಾನೂ ಕೂಡ ಇದ್ದೆ. ಯುವಜನೋತ್ಸವ ಮುಗಿಸಿಕೊಂಡು ಬೆಂಗಳೂರಿನ ಮೂಲಕ ಪೊನ್ನಂಪೇಟೆ ತಲುಪುವುದೆಂದು ನಮ್ಮ ತಂಡದ ನೇತೃತ್ವ ವಹಿಸಿದ್ದ ಉಪನ್ಯಾಸಕರು ನಿರ್ಧರಿಸಿದ್ದರು. ಮುಂಜಾನೆ ತುಮಕೂರಿನಿಂದ ಹೊರಟು ಬೆಂಗಳೂರು ತಲುಪಿದೆವು. ಬೆಂಗಳೂರಿನಿಂದ ಪೊನ್ನಂಪೇಟೆಗೆ ನಮ್ಮ ಬಸ್ ಇದ್ದದ್ದು ಮಧ್ಯಾಹ್ನದ ನಂತರ. ಆದ್ದರಿಂದ ಬೆಂಗಳೂರಿನಲ್ಲಿ ಕಾಲ ಕಳೆಯಲು ನಮಗೆ ಸಾಕಷ್ಟು ಸಮಯವಿತ್ತು. ಹುಡುಗಿಯರೆಲ್ಲಾ ಅವರ ಜನ್ಮಸಿದ್ದ ಹಕ್ಕಾದ ‘shopping’ ಮಾಡಲು ಮಿತ್ರ ಅರ್ಜುನನ ನೇತೃತ್ವದಲ್ಲಿ ಹೊರಟರು. ಉಳಿದಿದ್ದು ನಾನು, ನನ್ನ ಮಿತ್ರರಾದ ಅಶೋಕ, ಅನಿಲ್ ಕುಮಾರ್, ರಾಕೇಶ್ ಮತ್ತು ಇನ್ನೊಂದಷ್ಟು ಜನ.
ನನ್ನನ್ನೊಳಗೊಂಡಂತೆ ಇವರಲ್ಲಿ ಕೆಲವರಿಗೆ shopping ಅನ್ನೋ ಶಬ್ದವೇ ಹೊಸತು ಮತ್ತು ಅನೇಕರು ರಾಜ್ ಕುಮಾರ್ ಅಭಿಮಾನಿಗಳು. ಎಲ್ಲರೂ ಒಟ್ಟಿಗೆ ಚರ್ಚೆ ಮಾಡಿ ರಾಜ್ ಕುಮಾರ್ ನೋಡಲು ಹೋಗುವುದೆಂದು ನಿರ್ಧರಿಸಿ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹೊರಟೆವು. ರಾಜ್ ಕುಮಾರ್ ರ ಅಧಿಕೃತ ವಕ್ತಾರನಾಗಿದ್ದ ನನಗೆ ರಾಜ್ ಕುಮಾರ್ ಮನೆ ಸದಾಶಿವನಗರದಲ್ಲಿರುವುದೆಂದು ಯಾರಾದರೂ ಹೇಳಿಕೊಡಬೇಕೇ? ಎಲ್ಲರನ್ನೂ ಕರೆದುಕೊಂಡು ಸದಾಶಿವನಗರದ ಕಡೆಗೆ ಹೋಗುವ ಬಸ್ ಹತ್ತಿದೆ. ಕಂಡಕ್ಟರ್ ಹತ್ತಿರ ರಾಜ್ ಕುಮಾರ್ ಮನೆ ಹತ್ತಿರ ಹೋಗುತ್ತಾ ಎಂದು ಕೇಳಿದ್ದೆ. ಅದಕ್ಕೆ ಆತ ಹೋಗುತ್ತೆ, ನಿಲ್ದಾಣ ಬಂದಾಗ ಹೇಳುತ್ತೇನೆ ಎಂದು ಉತ್ತರಿಸಿದ್ದ. ಟಿಕೆಟ್ ಕೊಡುವ ಗಡಿಬಿಡಿಯಲ್ಲಿ ರಾಜ್ ಕುಮಾರ್ ಮನೆ ಹತ್ತಿರದ ನಿಲ್ದಾಣ ಬಂದಾಗ ಆತ ನಮಗೆ ಏನೂ ಹೇಳಲಿಲ್ಲ. ಬಸ್ ಅಲ್ಲಿಂದ ಮುಂದೆ ಹೊರಟಿತು. ಸ್ವಲ್ಪ ಸಮಯದ ನಂತರ ನಾನು ರಾಜ್ ಕುಮಾರ್ ಮನೆ ಇನ್ನೂ ಎಷ್ಟು ದೂರ ಇದೆ ಎಂದು ಕೇಳಿದೆ. ನೀವು ಹಿಂದಿನ ನಿಲ್ದಾಣವಾದ ಮೇಕ್ರಿ ಸರ್ಕಲ್ ಬಳಿ ಇಳಿಯಬೇಕಿತ್ತು ಎಂದು ಹೇಳಿದ. ನಾವು ಮುಂದಿನ ನಿಲ್ದಾಣದಲ್ಲಿ ಇಳಿದು ರಾಜ್ ಕುಮಾರ್ ಮನೆಗೆ ನಡೆದುಕೊಂಡು ಹೊರಟೆವು.
ದಾರಿಯುದ್ದಕ್ಕೂ ರಾಜ್ ಕುಮಾರ್ ರನ್ನ ಭೇಟಿ ಮಾಡಿದಾಗ ಯಾವ ರೀತಿ ವರ್ತಿಸಬೇಕು, ಅವರ ಬಳಿ ಏನು ಮಾತನಾಡಬೇಕು ಎಂಬುದೇ ಚರ್ಚೆ. ಎಲ್ಲರೂ ಗಹನವಾಗಿ ಚರ್ಚಿಸಿ, ರಾಜ್ ಕುಮಾರ್ ರ ಮನಸ್ಸಿಗೆ ನೋವಾಗಬಹುದಾದ್ದರಿಂದ ಯಾವುದೇ ಕಾರಣಕ್ಕೂ ರಾಜ್ ಕುಮಾರ್ ರ ಹತ್ತಿರ ವೀರಪ್ಪನ್ ಅಪಹರಣದ ವಿಷಯ ಮಾತನಾಡುವುದು ಬೇಡವೆಂದು ಸರ್ವ ಸಮ್ಮತವಾಗಿ ತೀರ್ಮಾನಿಸಿದೆವು. ಅದು ಬೇಸಿಗೆಯ ಸಮಯ, ಸೂರ್ಯ ನೆತ್ತಿಯ ಮೇಲೆ ಉಗ್ರತಾಂಡವವಾಡುತ್ತಿದ್ದ. ಅವರಿವರನ್ನು ಕೇಳಿಕೊಂಡು ರಾಜ್ ಕುಮಾರ್ ರವರ ಮನೆಯ ಹತ್ತಿರ ಬರುವಷ್ಟರಲ್ಲಿ ನಮಗೆ ಸಾಕು ಬೇಕಾಗಿತ್ತು. ರಾಜ್ ಕುಮಾರ್ ಮನೆಗೆ ಆಳೆತ್ತರದ ಕಾಂಪೌಂಡ್, ದೊಡ್ಡ ಗೇಟ್ ಗಳು, ಆಚೆ ಇಬ್ಬರು ಪೊಲೀಸ್ ಪೇದೆಗಳು. ಒಬ್ಬ ಪೇದೆಯನ್ನು ರಾಜ್ ಕುಮಾರ್ ರನ್ನು ನೋಡಬೇಕಿತ್ತು ಎಂದು ಕೇಳಿದೆವು. ಅದಕ್ಕೆ ಅವನು, ಈಗ ತಾನೇ ಅವರು ದೇವರ ತರ ಹೋದ್ರಲ್ಲಪ್ಪಾ ಎಂದುತ್ತರಿಸಿದ.
ಪೇದೆ ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ನಮಗೆ. ಮುಂದೆ ಏನು ಮಾಡಬೇಕು ಎಂದು ಅಲ್ಲೇ ನಿಂತು ಚರ್ಚೆ ಮಾಡುತ್ತಿದ್ದೆವು. ಅಷ್ಟರಲ್ಲಿ ಪೊಲೀಸ್ ಪೇದೆ ಇಲ್ಲಿ ಹಾಗೆಲ್ಲಾ ನಿಂತುಕೊಳ್ಳಬಾರದು ಹೋಗಿ, ಹೋಗಿ ಎಂದು ಗದರಿದ. ಅವನು ಗದರಿದ ಮೇಲೆ ಅವನು ರಾಜ್ ಕುಮಾರ್ ಬಗ್ಗೆ ಹೇಳಿದ್ದು ಸಂಪೂರ್ಣ ಸುಳ್ಳು. ರಾಜ್ ಕುಮಾರ್ ಮನೆಯಲ್ಲೇ ಇದ್ದಾರೆಂಬ ನಂಬಿಕೆ ಇನ್ನೂ ಬಲವಾಯಿತು. ಅಲ್ಲಿಂದ ಸ್ವಲ್ಪ ದೂರ ನಡೆದು ಬಂದೆವು. ಈ ಸನ್ನಿವೇಶ ನಮಗೆ ಸಂಪೂರ್ಣವಾಗಿ ಹೊಸತು ಹಾಗೂ ನಾವೂ ಅಷ್ಟೆಲ್ಲಾ ಚರ್ಚೆ ನಡೆಸಿದರೂ ಇಂತಹದೊಂದು ಸನ್ನಿವೇಶ ಬರಬಹುದು ಎಂಬ ಕಲ್ಪನೆಯೇ ನಮಗೆ ಇರಲಿಲ್ಲ. ಪುನ: ಏನು ಮಾಡಬೇಕೆಂದು ಎಲ್ಲರೂ ಚರ್ಚಿಸಿದೆವು. ರಾಜ್ ಕುಮಾರ್ ಮನೆಯಲ್ಲೇ ಇದ್ದಾರೆ ಪೇದೆ ಸುಳ್ಳು ಹೇಳುತ್ತಿದ್ದಾನೆ. ಹತ್ತಿರದ ಫೋನ್ ಬೂತ್ ಗೆ ಹೋಗಿ, ಟೆಲಿಫೋನ್ ಡೈರೆಕ್ಟರಿಯಿಂದ ರಾಜ್ ಕುಮಾರ್ ಮನೆ ನಂಬರ್ ಪತ್ತೆ ಮಾಡಿ ಫೋನ್ ಮಾಡುವುದು. ರಾಜ್ ಕುಮಾರ್ ರ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುವುದು ಪಾರ್ವತಮ್ಮ ರಾಜ್ ಕುಮಾರ್ ಆದ್ದರಿಂದ ಟೆಲಿಫೋನ್ ಡೈರೆಕ್ಟರಿಯಲ್ಲಿ ಪಾರ್ವತಮ್ಮ ಅನ್ನೋ ಹೆಸರಿನಲ್ಲಿ ಇರುವ ನಂಬರ್ ಗಳಿಗೆ ಕರೆ ಮಾಡುವುದು. ಇವು ನಮ್ಮ ಗಹನ ಚರ್ಚೆಯ ಮುಖ್ಯಾಂಶಗಳು. ನಮಗೆ ಆವಾಗ ರಾಜ್ ಕುಮಾರ್ ಭೇಟಿಗಿಂತ ಆ ಪೇದೆ ಸುಳ್ಳು ಹೇಳುತ್ತಿದ್ದಾನೆ ಎಂದು ಸಾಬೀತುಪಡಿಸುವುದೇ ಬಹುಮುಖ್ಯ ಗುರಿಯಾಗಿತ್ತು.
ಅಲ್ಲೇ ಹತ್ತಿರದಲ್ಲಿ ಒಂದು ಟೆಲಿಫೋನ್ ಬೂತ್ ಪತ್ತೆ ಮಾಡಿದೆವು. ನನ್ನ ಮಿತ್ರರು ಟೆಲಿಫೋನ್ ಡೈರೆಕ್ಟರಿಯಲ್ಲಿ ಪಾರ್ವತಮ್ಮ ಅನ್ನುವ ಹೆಸರಿನಲ್ಲಿ ನೋಂದಣಿಯಾಗಿದ್ದ ದೂರವಾಣಿ ಸಂಖ್ಯೆಗಳನ್ನು ಹುಡುಕಿದರು. ಮೂರೋ ನಾಲ್ಕೋ ದೂರವಾಣಿ ಸಂಖ್ಯೆಗಳು ದೊರಕಿ ಕರೆ ಮಾಡಲು ಪ್ರಾರಂಭಿಸಿದರು. ಎಲ್ಲವೂ wrong numberಗಳೇ. ಬೆಳ್ಳಂಬೆಳಗ್ಗೆ ತಿಂಡಿ ತಿಂದ ಮೇಲೆ ಏನೂ ತಿಂದಿರಲಿಲ್ಲ ಮತ್ತು ರಾಜ್ ಕುಮಾರ್ ಮನೆ ಹುಡುಕಿಕೊಂಡು ಉರಿ ಬಿಸಲಿನಲ್ಲಿ ಸಾಕಷ್ಟು ಅಲೆದಿದ್ದರಿಂದ ಎಲ್ಲರಿಗೂ ಸಾಕಾಗಿ ಹೋಗಿತ್ತು. ಇದೆಲ್ಲದರ ಪರಿಣಾಮದಿಂದ ರಾಜ್ ಕುಮಾರ್ ಭೇಟಿ ಮಾಡುವ ಆಸೆಯೂ ಕರಗಿ ಹೋಗಿ, ಇನ್ನು ಹಿಂತಿರುಗುವದೆಂದು ತೀರ್ಮಾನಿಸಿ ಆ ಪೇದೆಯನ್ನು ಬೈದುಕೊಂಡು ಮೆಜೆಸ್ಟಿಕ್ ಗೆ ಹೋಗುವ ಬಿಎಂಟಿಸಿ ಬಸ್ ಹಿಡಿದು ಮರಳಿದೆವು.
ಚಲನಚಿತ್ರ ನಟರು ತಮ್ಮದೇ ಆದ ದಂತಗೋಪುರದಲ್ಲಿ ಜೀವಿಸುತ್ತಿರುತ್ತಾರೆ, ಸಾರ್ವಜನಿಕರು ಅವರನ್ನು ಭೇಟಿ ಮಾಡುವುದು ಕಷ್ಟ ಎಂಬ ಅರಿವೇ ಇಲ್ಲದೆ ರಾಜ್ ಕುಮಾರ್ ರನ್ನು ಭೇಟಿ ಮಾಡಿ ಅವರನ್ನು ಮಾತನಾಡಿಸಿ, ಅವರ ಮನೆಯಲ್ಲಿ ಕಾಫಿ/ಟೀ ಕುಡಿದು ಹಿಂದಿರುಗುವುದೆಂದು ಬಂದಿದ್ದ ನಮಗೆ, ರಾಜ್ ಕುಮಾರ್ ರ ಭೇಟಿ ಸಾಧ್ಯವಾಗಲಿಲ್ಲ. ಆದರೆ ಆ ಸಾಹಸ ಯಾತ್ರೆಯ ವಿವರಗಳು ಸ್ಮೃತಿ ಪಟಲದಲ್ಲಿ ಹಾಗೇ ಉಳಿದಿವೆ. ಇವತ್ತು ಅದರ ಬಗ್ಗೆ ಯೋಚಿಸಿದಾಗ ನಮ್ಮ ಬಾಲಿಶತನ, ಮುಗ್ಧತೆ, ಆ ಸಂದರ್ಭದಲ್ಲಿ ನಮ್ಮ ಯೋಚನಾಲಹರಿ ಹೀಗೇ ಎಲ್ಲವೂ ನಗೆ ತರಿಸುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ